ಔರ್ಬಾಹ್ ಬೆರ್ಥೋಲ್ಡ್‌ : 1812-82. 19ನೆಯ ಶತಮಾನದ ಮಧ್ಯಭಾಗದಲ್ಲಿ ಬಹು ಜನಪ್ರಿಯನಾಗಿದ್ದ ಜರ್ಮನ್ ಕಾದಂಬರಿಕಾರ. ಬ್ಲಾಕ್ ಫಾರೆಸ್ಟ್‌ನ ವುರ್ಟೆಮ್ಬೆರ್ಗ್ ಭಾಗದ ನಾರ್ದ್ಸ್ವೆಟನ್ ಎಂಬ ಊರಿನ ಯೆಹೂದಿ ಕುಟುಂಬವೊಂದರಲ್ಲಿ ಜನಿಸಿದ. ಯೆಹೂದಿ ಧಾರ್ಮಿಕ ಮಡಿವಂತಿಕೆಯ ಕಟ್ಟನ್ನು ಬಹುಬೇಗ ಕಳಚಿಕೊಂಡು ಟ್ಯೂಬಿಂಗನ್ ವಿಶ್ವವಿದ್ಯಾನಿಲಯದಲ್ಲಿ ಒಂದು ವರ್ಷವಿದ್ದು ವ್ಯಾಸಂಗಮಾಡಿದ. ಆಗಲೇ ಈತನಿಗೆ ಸುವಿಖ್ಯಾತ ತತ್ತ್ವಜ್ಞನಾಗಿದ್ದ ಸ್ಟಿನೋಜ಼ನಲ್ಲಿ ಆಸಕ್ತಿಯುಂಟಾಯಿತು. ಮೆಚ್ಚುಗೆಯೂ ಆಯಿತು. ಆತನನ್ನೇ ನಾಯಕನನ್ನಾಗಿ ಮಾಡಿಕೊಂಡು ಸ್ಟಿನೋಜ಼ ಎಂಬ ತನ್ನ ಮೊದಲ ಕಾದಂಬರಿಯನ್ನು ಬರೆದು ಪ್ರಕಟಿಸಿದ (1837). 18ನೆಯ ಶತಕದ ಯೆಹೂದಿ ಜೀವನವನ್ನಾಧರಿಸಿ ದಿಷ್ಟರ್ ಊಂಡ್ ಕಾಫ್ಮನ್ ಎಂಬ ಮತ್ತೊಂದು ಕಾದಂಬರಿಯನ್ನು ಪ್ರಕಟಿಸಿದ (1839).

ಷ್ವಾರ್ಜ್ವಾಲ್ಡೆರ್ ಡೋರ್ಫ್ ಗೆಷಿಷ್ಟೆನ್ ಎಂಬ ಬೃಹತ್ ಕಾದಂಬರಿಯ ಮೊದಲ ಭಾಗ 1843ರಲ್ಲೇ ಬಂದರೂ ಅವನ್ನು ಪುರ್ಣವಾಗಿ ಬರೆಯಲು 10 ವರ್ಷ ಹಿಡಿಯಿತು. ಮೊದಲ ಭಾಗ ಪ್ರಕಟವಾಗುತ್ತಲೆ ಅದರ ಕೀರ್ತಿ ಹಬ್ಬಿತು. ಸಮಾಜದಲ್ಲಿ ಕ್ರಾಂತಿಯುತ ಮಾರ್ಪಾಟಾಗಬೇಕು ಎಂಬ ಉದ್ದೇಶವಿಟ್ಟುಕೊಂಡೇ ಬರೆಯುತ್ತಿದ್ದವರ ಕಾದಂಬರಿಗಳನ್ನೇ ಓದಿ ಓದಿ ಸಾಕಾಗಿಹೋಗಿದ್ದ ವಾಚಕರಿಗೆ ಹಳ್ಳಿಗಾಡಿನ ಬದುಕನ್ನು ಕುರಿತ ಈ ಕಾದಂಬರಿ ಅಪೇಕ್ಷಣೀಯ ಸಮಯಕ್ಕೆ ಬೀಸಿದ ಹಿತವಾದ ತಂಗಾಳಿಯಂತೆ ಸ್ವಾಗತಾರ್ಹವಾಯಿತು.

ಹಳ್ಳಿಯ ಜೀವನವನ್ನು ಚಿತ್ರಿಸುವಂಥ ಕಾದಂಬರಿಗಳನ್ನು ಬರೆದ ಮೊದಲಿಗರಲ್ಲಿ ಈತನೂ ಒಬ್ಬ. ಆಗ ಜರ್ಮನ್ ಸಾಹಿತ್ಯದಲ್ಲಿ ವಾಸ್ತವತಾವಾದದ ಹೊಸ ದೃಷ್ಟಿ ಪ್ರಮುಖವಾಗಿತ್ತು. ಯಾವ ಅತಿರೇಕಕ್ಕೂ ವಾಲದೆ ವಾಸ್ತವತೆ ಹಾಗೂ ರಮ್ಯಕತೆಯ ಮಧುರ ಮಿಶ್ರಣವನ್ನು ತನ್ನ ಕೃತಿಗಳಲ್ಲಿ ಬಳಸಿಕೊಂಡ ಔರ್ಬಾಹ್ ಜನಪ್ರಿಯನಾದ. 

ತನ್ನ ಸಮಕಾಲೀನ ಬದುಕಿನ ಸಾಮಾಜಿಕ, ಆರ್ಥಿಕ ಸಮಸ್ಯೆಗಳನ್ನು ಎತ್ತಿಕೊಂಡು ಶ್ರೀಸಾಮಾನ್ಯನ ಅಂತರಂಗವನ್ನು ಚೆನ್ನಾಗಿ ಅರ್ಥಮಾಡಿಕೊಂಡು ಈತ ಕೃತಿರಚನೆ ಮಾಡಿದ್ದಾನೆನ್ನುವುದು ಸುವ್ಯಕ್ತವಾಗಿದೆ. ಈತ ಸೃಜಿಸಿದ ಹಳ್ಳಿಗರಿಗೆ ಸಮಕಾಲೀನ ಪ್ರಜ್ಞೆ ಇಲ್ಲದಿರಲಿಲ್ಲ. ಆಗಿನ ಯುವಜನರ ವಿಚಾರದ ಗಾಳಿ ಅವರ ಮೇಲೂ ಬೀಸಿ ಅವರು ಪ್ರಗತಿಶೀಲರಾಗಿದ್ದರು. ಕಾದಂಬರಿಕಾರನ ಮನೋಧರ್ಮ, ವಿಚಾರ ದೃಷ್ಟಿಗಳೇ ಸಾಕಷ್ಟು ಅವರಲ್ಲಿ ತುಂಬಿದ್ದವು. ಈತನ ಕಾದಂಬರಿಗಳಲ್ಲಿ ಪ್ರಜ್ಞಾಪುರ್ವಕವಾದ ಭಾವಾತಿರೇಕವಿರುವುದು ಎದ್ದುಕಾಣುತ್ತದೆ. ಕ್ರಮೇಣ ಈ ಭಾವುಕತೆ ವಾಸ್ತವತೆಯ ಕಡೆ ಬಾಗುತ್ತದೆ. ಆದರೆ ಮೊದಲಲ್ಲಿ ಔರ್ಬಾಹ್ ಭಾವಪ್ರಧಾನವಾಗಿ ಬರೆದ ಕಾದಂಬರಿಗಳು ಓದುಗರ ಚಿತ್ತವನ್ನು ತುಂಬ ಆಕರ್ಷಿಸಿದುವಲ್ಲದೆ, ಅಂಥ ಕಾದಂಬರಿಗಳನ್ನೇ ಅಪೇಕ್ಷಿಸುವ, ಓದುವ, ಗೀಳನ್ನು ಹೊತ್ತಿಕ್ಕಿದುವು.

ಈತನ ಅತ್ಯಂತ ಜನಪ್ರಿಯ ಕೃತಿಗಳಲ್ಲಿ ಡೈ ಫ್ರಾವ್ ಪ್ರೊಫೆಸ್ಸೊರಿನ್ (1846), ಬಾಫೂರ್ಯ್‌ಸ್ಸೆಲೆ (1856), ಡೈ ಗೆಷಿಷ್ಟೆ ಡೆಸ್ ಡೀಥೆಲ್ಮ್‌ ಫೋನ್ ಬ್ಯೂಷೆನ್ಬೆರ್ಗ್ (1852), ಔಫ್ ಡೆರ್ ಹೋಹೆ (1865) ಮತ್ತು ಡಾಸ್ ಲ್ಯಾನ್ಧೌಸ್ ಆಮ್ ರ್ಹೀನ್ ಎಂಬೀ ಕಾದಂಬರಿಗಳನ್ನು ಹೆಸರಿಸಬಹುದು.	(ಕೆ.ಬಿ.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ